ನೀವು ದೊಡ್ಡ ಬೆಟ್ಟದ ಮುಂದೆ ನಿಂತುಕೊಂಡಿರ್ತಿರ. ಬೆಟ್ಟ ಹತ್ತುವ ಆಸೆ ನಿಮಗೆ ಇರೋದಿಲ್ಲ. ಬೆಟ್ಟ ಹತ್ತುವುದು ಕೂಡ ಒಂದು ಆಸೆ ಅಂತ ನಿಮಗೆ ಗೊತ್ತಿರೋದಿಲ್ಲ. ಅಂಥಾದ್ರಲ್ಲಿ ಯಾರೋ ಒಬ್ಬ ಬರುತ್ತಾನೆ. ನಿಮಗೆ ಬೆಟ್ಟ ಹತ್ತುವ ಆಸೆ ತುಂಬುತ್ತಾನೆ. ಆತನೇ ನಿಮಗೆ ಸಹಾಯ ಮಾಡಿ ಬೆಟ್ಟ ಹತ್ತಲು ಕಾರಣನಾಗುತ್ತನೆ, ನೀವು ಬೆಟ್ಟ ಹತ್ತಿ ಇನ್ನೇನು ಎರಡು ಕೈ ಎತ್ತಿ ಕೂಗುವಷ್ಟರಲ್ಲಿ, ನಿಮಗೆ ಬೆಟ್ಟ ಹತ್ತಲು ಸಹಾಯ ಮಾಡಿದ ವ್ಯಕ್ತಿ ಹಿಂದಿಂದ ನಿಮ್ಮನು ತಳ್ಳಿಬಿಡುತ್ತಾನೆ, ನೀವು ಮೊದಲಿನಂತೆ ಕೆಳಗೆ ಬಿದ್ದಿರುತ್ತಿರಿ, ಆದರೆ ಜೀವ ಇಲ್ಲದಂತೆ. ಈಗ ನಮಗೆ ಬೆಟ್ಟ ಹತ್ತೋಕೆ ಸಹಾಯ ಮಾಡಿದ ಅವನನ್ನು ಹೋಗಳಬೇಕ? ಅಥವಾ ಬೆಟ್ಟದಿಂದ ತಳ್ಳಿದ ಅವನನ್ನು ಬೈಯ್ಯಬೇಕ? ಅವನು ಇರದೇ ಇದ್ದಿದ್ದರೆ ನಮಗೆ ಬೆಟ್ಟ ಹತ್ತಲು ಆಗುತ್ತಲೇ ಇರಲಿಲ್ಲ. ಅದನ್ನು ಹತ್ತಲು ಪ್ರಯತ್ನವನ್ನೂ ಮಾಡದೆ ನಿರ್ಲಿಪ್ತತೆ ಇಂದ ಇದ್ದುಬಿಡುತ್ತಿದ್ದೆವು. ಒಂದು ಲೆಕ್ಕದಲ್ಲಿ ಅವನಿಂದ ನಮ್ಮ ಜೀವನದಲ್ಲಿ ಚಲನೆ ಉಂಟಾಯಿತು. ಆದರೆ ಇನ್ನೊಂದು ಲೆಕ್ಕದಲ್ಲಿ ನಾವು ಬೆಟ್ಟ ಹತ್ತದೆ ಹಾಗೆ ಇದ್ದಿದ್ದರೆ ನಾವು ಜೀವ ಕಳೆದುಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ. ನಿರ್ಲಿಪ್ತತೇನೋ ಏನೋ, ಒಟ್ಟಿನಲ್ಲಿ ಇನ್ನೂ ಜೀವ ಇರುತ್ತಿತ್ತು. ಜೀವನ ಇರುತ್ತಿತ್ತು. ಮುಂದೆ ಇನ್ನೇನೋ ಬದಲಾವಣೆ ಆಗಿ ಇನ್ಯಾವುದೋ ಹೊಸ ಜೀವನ ಬರುತ್ತಿತ್ತೋ ಏನೋ.

ಜೀವನದಲ್ಲೂ ಹೀಗೆ, ಗೊತ್ತಿಲ್ಲದೇ ಯಾರದೋ ಸಹಾಯ ತೆಗೆದುಕೊಂಡು ಅವರ ಹಂಗಿಗೆ ಬೀಳುವುದು ಅರೆಜೀವ ಆದಂತೆ. ಕೊಡುವುದನ್ನು ಕೊಟ್ಟು ನಂತರ ನಮ್ಮನ್ನು ಜೀತದಾಳುವಿನಂತೆ ನೋಡುವುದು ಎಷ್ಟರ ಮಟ್ಟಿಗೆ ಸರಿ. ಸಹಾಯ ಎನ್ನುವುದು ನೀವಾಗೆ ಮಾಡುವುದು ಅಂದಮೇಲೆ, ಮಾಡಿದ ಸಹಾಯಕ್ಕೆ ಇನ್ನೇನೋ ಬಯಸುವುದು ತಪ್ಪಲ್ಲವೇ, ಯಾವತ್ತೋ ಒಂದು ದಿನ ರಸ್ತೆ ಮೇಲೆ ಒಬ್ಬ ಭಿಕ್ಷುಕನಿಗೆ ಹತ್ತು ರುಪಾಯಿ ಕೊಟ್ಟು ನಂತರ ಆತ ದಿನಾ ಸಿಕ್ಕಿದಾಗಲೆಲ್ಲ ನಮಗೆ ನಮಸ್ಕಾರ ಮಾಡಬೇಕೆನ್ನುವುದು ತಪ್ಪಲ್ಲವೇ. ಹಾಗೆ ಭಿಕ್ಷುಕನು ದಿನಾ ದುಡ್ಡು ಕೊಡಬೇಕು ಎಂದು ಬಯಸುವುದೂ ತಪ್ಪೇ ಅನ್ನಿ.

ಇಲ್ಲಿ ವ್ಯತ್ಯಾಸ ಬೀಳುವುದು ಕೊಟ್ಟ ಮೇಲೆ ನಾವು ನಡೆದುಕೊಳ್ಳುವುದರಲ್ಲಿ. ಬಲ ಕೈಗೆ ಕೊಟ್ಟಿದ್ದು ಎಡ ಕೈಗೆ ಗೊತ್ತಾಗದಂತೆ, ಕೊಟ್ಟಿದ್ದನ್ನು ಬಿಟ್ಟು ಬಿಟ್ಟರೆ ಸಮಸ್ಯೆ ಇರೋದಿಲ್ಲ ಅನ್ನಿಸುತ್ತೆ. ಹಾಗಂತ ನೀವು ಕೊಟ್ಟ ಸಾಲವನ್ನು ಮರೆತುಬಿಡಿ ಎಂದು ನಾನು ಹೇಳುತ್ತಿಲ್ಲ!!

– ದೀಪಕ್ ಬಸ್ರೂರು