ಬಾಲ್ಯದ ಮಳೆಗಾಲ
by Navami
ನಾನು ಸಣ್ಣವಳಿದ್ದಾಗ ನಮ್ಮದು ಕೂಡು ಕುಟುಂಬ, ಮನೆಯಲ್ಲಿ ೫ ಜನ ಮಕ್ಕಳು. ಮಳೆಗಾಲ ಬಂತಂದ್ರೆ, ಅಜ್ಜ ಅಜ್ಜಿಗೆ ಉಳುಮೆ ನಾಟಿಗೆ ಆಳು ಹುಡುಕುವ ಮಂಡೆ ಬಿಸಿ, ಆದರೆ ನಮಗೆ ಬೇಸಿಗೆ ರಜೆ ಪೂರ್ತಿಯ homework ಎರಡೇ ದಿನದಲ್ಲಿ ಮುಗಿಸುವ ತರಾತುರಿ. ಅಜ್ಜ ಕರೆಸಿದ ಗದ್ದೆ ಉಳುವವ ಜೋಡಿ ಎತ್ತಿಗೆ 'ಎಡತ್' 'ಬಲತ್' ಅಂತ ಸೂಚನೆ ಕೊಟ್ಟು ಊಳುತ್ತಿರುವಾಗ ನಮ್ಮ ತಮ್ಮ 'ಅನ್ನು' ನೇಗಿಲ ಮೇಲೆ ನಿಂತು ಅವನ ಸಾಹಸ ಪ್ರದರ್ಶನ ಮಾಡ್ತಾ ಇದ್ದ. ಎರಡನೇ ತಮ್ಮ 'ಮುನ್ನ' ಅಂತೂ, ಗದ್ದೆಯ ಸಪೂರವಾದ ಬದುವಿನ ಮೇಲೆ ಸೈಕಲ್ ಬಿಡುವ ಹುಚ್ಚು. ಒಂದು ಸಾರಿ ಒಂದೇ ದಿನ 15 ಸರಿ ಅವನು ಸೈಕಲ್ಲಿಂದ ಕೆಳಗೆ ಬಿದ್ದಿದ್ದುಂಟು. ನಾನು bobcut ಕೂದಲು ಇಟ್ಟುಕೊಂಡು ತಲೆಯನ್ನು ಕೆಸರಲ್ಲಿ ಮುಳುಗಿಸಿ 'Neema Sandle girl' ನೀರಿಂದ ಎದ್ದು ಪೋಸ್ ಕೊಟ್ಟ ಹಾಗೆ ನಾನು ಕೆಸರಲ್ಲಿ ಪೋಸ್ ಕೊಡ್ತಾ ಇದ್ದೆ. ಒಂದು ಸರಿ ಮೈ ತುಂಬ ಕೆಸರು ಮಾಡಿಕೊಂಡು ಮನೆಯೊಳಗೆ ಕಾಲಿಟ್ಟು ನೆಲ ಗಲೀಜು ಆದದ್ದಕ್ಕೆ ಪೆಟ್ಟು ತಿಂದದ್ದು ಉಂಟು. ಇಷ್ಟೆಲ್ಲಾ ನಡೀತಿರುವಾಗ, ನನ್ನಕ್ಕ ನಮ್ಮೆಲ್ಲರಿಗಿಂತ ದೊಡ್ಡವಳು, ನಾವು ಯಾರೂ ಅವಳಿಗೆ ಪರಿಚಯವೇ ಇಲ್ಲದಂತೆ ಆಡ್ತಿದ್ಲು. ಅವಳಿಗೋ ಕೆಲಸದಾಳುಗಳ ಜೊತೆ ಸೇರಿ ನಾಟಿ ಮಾಡುವ ಉತ್ಸಾಹ. ಅವಳು ನೆಟ್ಟ ಬತ್ತದ ಹುಲ್ಲು ಸರುತ ನಿಲ್ತಾ ಇಲ್ಲ ಅಂಥ ಅಜ್ಜಿಯ ಬೈಗುಳ ಬೇರೆ. ಹಾಗೆ ಮೂರು ತಿಂಗಳ ನಂತರ ಬೆಳೆದ ಬತ್ತಕ್ಕೆ ಅಜ್ಜ ಪೂಜೆ ಮಾಡಿ ಹೊಸ ಬೆಳೆ ಮನೆಗೆ ತರುವಾಗ ನಮಗೆ ಜಾಗಟೆ ಶಂಖ ಊದುವ ಸಂಭ್ರಮ. ಆ ದಿನ ಮನೆಯಲ್ಲಿ ಹೊಸ ಅಕ್ಕಿಯ ಪಾಯಸ! ಈ ವರ್ಷ ನವರಾತ್ರಿ ಸಮಯದಲ್ಲಿ, ಯಾರದೋ ಗದ್ದೆಯಿಂದ ಒಂದು ಹಿಡಿ ಅಕ್ಕಿ ತಂದು ಹೊಸ ಅಕ್ಕಿ ಪಾಯಸ ಮಾಡಿದೆ ಅಂತ ಅಮ್ಮ ಪೋನ್ ಮಾಡಿ ಹೇಳಿದಾಗ ಆ ಹಳೆಯ ದಿನಗಳು ನೆನಪಾದವು.
- ನವಮಿ